ಹಾರುತಿರುವ ಪತಾಕೆಯಡಿ
ನೂರಾರು ಶವಗಳ ಮೌನ -ಮಾತು
"ಇದು ಕದನ ವಿರಾಮವೇ ಅಥವಾ ರಾಜ ನಿದ್ರಿಸುತಿಹನೆ?"
ಪ್ರಾಣಪಕ್ಷಿ ಹಾರುತಿವೆ
ಚಳಿ ಗಾಳಿಯೊಡನೆ ಅಂತಃಪುರದೆಡೆಗೆ ,
ಕಿಟಕಿಯ ತೆರೆಯಲ್ಲಿ ಅಡಗಿಕೊಳ್ಳಲು -
ಕದನ ಸಾರವನು ಕಿವಿಯಿಟ್ಟು ಕೇಳಲು ..
ಕತ್ತಲ ಜಗತ್ತೆ ಹಾಯಾಗಿದೆ ,
ಪಕ್ಕ ಮಲಗಿರುವವ ಇನ್ನು ವೈರಿಯಲ್ಲ -
ವೈರವಿಲ್ಲ ಯಾರೊಂದಿಗೂ ಮತ್ತೆಂದಿಗೂ ,
ಸೋಲಿನ ಭಾರ ಹೊರುವ ಹೊಣೆ ಇಲ್ಲ -
ಗೆಲುವಿನ ಗಾರುಡಿಗೆ ಮರುಳಾಗಿ ಕಾಯುವ ಕಷ್ಟವಿಲ್ಲ,
ಬೆಳಗಾದರೆ ಒಯ್ಯುವರು ರುದ್ರಭೂಮಿ ಅತ್ತ ,
ಮತ್ತೆ ಅಣಿ ಮಾಡಲು ರಣ ಭೂಮಿಯನು ......
ಅರಿಯದ ನಾಳೆಗಳಲಿ ಅಡಗಿದ ಮನಸ್ಸಿಗೆ
ಆಸರೆಯಾಗಿ ನಿಂತು ತನ್ನ ಪ್ರೀತಿಯ ಭಾರವನ್ನು
ನನ್ನ ಖಡ್ಗದ ಅಂಚಿಗೆ ಕಟ್ಟಿ ಯುದ್ಧ ಮುನ್ನ
ಹೂ ಮುತ್ತನಿತ್ತು ಕಳುಹಿಸಿದ ಮಡಗಿ ಮಲಗಿಹಳೆ....??
ನನ್ನ ಸಾವು ಅವಳ ಮನಸಲ್ಲಿಹುದೇ ..??
ಈ ಮುಗ್ಧ ಪ್ರಶ್ನೆಗೆ ಮೊನ್ನೆ ಮೊನ್ನೆ ಯಷ್ಟೇ
ಮೊದಲ ಹೆಜ್ಜೆ ಇತ್ತ ನನ್ನ ಮಗುವೆ ಉತ್ತರಿಸಬೇಕು ...
ಬರಿ ನನ್ನೋಬನದು ಅಲ್ಲದ ನಿಂತ ಉಸಿರುಗಳ ಪ್ರಶ್ನೆ ಇದು ....
ಅರಸನ ಬೆನ್ನಿಗೆ ಚೂರಿ ಇಹುದು
ಕಣ್ಮುಂದೆ ಅಗಲ ಕಂಗಳ ರಾಣಿ ಇಹಳು ,
ನನ್ನಂತಹ ಮುಚ್ಚಿದ ಕಣ್ಣುಗಳೊಳಗೆ ನಾಳೆ ಇದೆ -
ನಮ್ಮವರೆಂಬ ಮಡದಿ ಮಕ್ಕಳ ನಾಳೆ ಇದೆ ....
ಯುದ್ದದ ಸದ್ದಿಗೆ, ನಾ ಮಣ್ಣಾಗುವ ಮುನ್ನ ..
ಸಾವಿಗೊಂದು ಬೆಲೆ ಕೊಟ್ಟು
ಯುದ್ದ ,ಜಯ ಇವಕ್ಕೆಲ್ಲ ಅರ್ಥವಿತ್ತು
ನೀ ಕಲ್ಲಾಗು ಬೇಕಾದರೆ ,
ನನ್ನ ಸಮಾಧಿಯಿಂದ ದೂರ -ಬಹು ದೂರ ......